ಬುಧವಾರ, ಆಗಸ್ಟ್ 12, 2015

ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳ ಅಭಿಪ್ರಾಯ ಏನು?

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ: ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡುವ ಯೋಗ್ಯತೆ ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ತೊಲಗಲಿ. ಅಧಿಕಾರದಿಂದ ಕೆಳಗಿಳಿಯುವ ಪೂರ್ವದಲ್ಲಿ ಸಾಲ ಮನ್ನಾ ಘೋಷಣೆ ಮಾಡಿ ಹೋಗಲಿ, ಮುಂಬರುವ ಸರ್ಕಾರ ಸಾಲ ತೀರಿಸುತ್ತದೆ.
ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಲಘುವಾಗಿ ಪರಿಗಣಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಕುಟುಂಬಕ್ಕೆ ಸರ್ಕಾರ ಅನಾಥ ಭಾಗ್ಯ ಕರುಣಿಸುತ್ತಿದೆ. ಸಾಲ ಮನ್ನಾ ಮಾಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದ ಮಾತುಗಳನ್ನಾಡುತ್ತಿದ್ದಾರೆ. ರೈತರ ನೆರವಿಗೆ ಬಾರದವರು ಅಧಿಕಾರದಿಂದ ಕೆಳಗಿಳಿಯಲಿ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ: ರೈತರ ಆತ್ಮಹತ್ಯೆ ತಡೆಯಲು ಕರ್ನಾಟಕ ಸರ್ಕಾರ ತಕ್ಷಣವೇ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು.
ರೈತರಿಗೆ ಪರಿಹಾರ ನೀಡಲು ಶೇ.75ರಷ್ಟು ಕೇಂದ್ರದಿಂದ ಅನುದಾನ ನೀಡುವುದಾಗಿ ಹಣಕಾಸು ಸಚಿವರು ಭರವಸೆ ನೀಡಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲು ಶೇ 25ರಷ್ಟು ಭರಿಸಲು ಮುಂದೆ ಬಂದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ:
ರಾಜ್ಯದಲ್ಲಿ ನಡೆಯುತ್ತಿರುವ ರೈತರ ಸರಣಿ ಆತ್ಮಹತ್ಯೆ ತಡೆಗೆ ಸಾಲ ಮನ್ನಾವೊಂದೇ ಪರಿಹಾರವಲ್ಲ. ಮೀಟರ್ ಬಡ್ಡಿ ಪ್ರಕರಣ ಸಂಬಂಧಿಸಿದಂತೆ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಒಂದು ತಿಂಗಳ ಅವಧಿಯಲ್ಲಿ ಒಂದು ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು 560 ಜನರನ್ನು ಬಂಧಿಸಲಾಗಿದೆ.  ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡುವುದರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗಿದೆ.

ಕುಮಾರಣ್ಣನಿಗೆ ಸರಕಾರ ಉರುಳಿಸುವ ಅವಸರ, ಯಡ್ಡಿಗೆ ತನ್ನ ಅಸ್ತಿತ್ವ ಮತ್ತು ವಿಶ್ವಾಸ ಉಳಿಸಿಕೊಳ್ಳುವ ಹಂಬಲ, ಸಿದ್ದಣ್ಣನಿಗೆ ಸರಕಾರ ಉಳಿಸಿಕೊಳ್ಳುವ ಜವಾಬ್ದಾರಿ. ಈ ಕಾರಣಕ್ಕಾಗಿ ರೈತರ ಪ್ರಕರಣಗಳಲ್ಲಿ ಒಂದು ನಿಶ್ಚಯವಾದ ನಿರ್ಧಾರವನ್ನು ಇವರಿಂದ ಕೈಗೊಳ್ಳಲಾಗುತ್ತಿಲ್ಲ. ಒಟ್ಟಿನಲ್ಲಿ ಇವರ ಚರ್ಚೆ, ಆರೋಪ, ಪ್ರತ್ಯಾರೋಪ, ಒಣ ಜಂಭಗಳು ಮುಗಿಯುವ ಸಮಯದಲ್ಲಿ ರಾಜ್ಯದಲ್ಲಿ ಒಬ್ಬನಾದರೂ ರೈ ಉಳಿದಿದ್ದರೆ ಕರ್ನಾಟಕದ ಜನತೆ ನಾವು ಹೆಮ್ಮೆಪಡೋಣ

ಮಂಗಳವಾರ, ಜುಲೈ 14, 2015

  ಕಾಪಾಡು ಎಂದರೆ ಕೊಂದೇ ಬಿಟ್ಟ

ಕಾಪಾಡು.... ಎಂದು ದೇವರ ಬಳಿಗೆ ತೆರಳಿದ ಭಕ್ತರನ್ನ ಆ ನಿಷ್ಕರುಣಿ ದೇವ ಕೊಂದೇ ಬಿಟ್ಟ.... ದಕ್ಷಿಣದ ಕುಂಭಮೇಳ ಎಂದೇ ಹೆಸರು ಪಡೆದಿರುವ ಆಂಧ್ರದ ಪವಿತ್ರ ಗೋದಾವರಿ ಮಹಾಪುಷ್ಕರ ಮೇಳವು 144 ವರ್ಷದ ಬಳಿಕ ಇದೀಗ ಮತ್ತೆ ಬಂದಿದ್ದು, ರಾಜಮಂಡ್ರಿಯ ಪುಷ್ಕರ ಘಾಟ್ ನ ನದಿಯಲ್ಲಿ ಪುಣ್ಯ ಸ್ನಾನ ಮಾಡಲೆಂದು ಲಕ್ಷಾಂತರ ಜನರು ಸೇರಿದ್ದು, ಈ ಸಂದರ್ಭ ನೂಕು ನುಗ್ಗಲು ನಡೆದು ಸುಮಾರು 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ದೇವರಿಂದ ವಂಚನೆಗೊಳಗಾಗಿದ್ದಾರೆ.
ಈ ಘಟನೆಯು ಸರಕಾರದ ಅಸಮರ್ಥ ಭದ್ರತೆಯಿಂದ ನಡೆದಿದೆ ಎನ್ನಲಾಗಿದ್ದು, ಸತ್ತಾಕ್ಷಣವೇ ಮೃತರಿಗೆ 10 ಲಕ್ಷ ಪರಿಹಾರ ಘೋಷಣೆ ಮಾಡಿ ತನ್ನ ಜವಾಬ್ದಾರಿಯನ್ನ ನಿಭಾಯಿಸಿದೆ. ಇದೇ ಹಣವನ್ನು ಸೂಕ್ತ ಭದ್ರತೆಗಾಗಿ ವಿನಿಯೋಗಿಸಿದ್ದರೆ  ಜನರ ಪ್ರಾಣವಾದರೂ ಉಳಿತಿತ್ತು.


ಶುಕ್ರವಾರ, ಜುಲೈ 10, 2015

ಕುದಿಯುವ ಎಣ್ಣೆಯಲ್ಲಿ ಧ್ಯಾನ ಮಾಡಿದ ಬೌದ್ಧ ಬಿಕ್ಕು

ಬ್ಯಾಂಕಾಕ್: ಇತ್ತೀಚೆಗೆ ವಿಶ್ವ ಯೋಗದಿನವನ್ನು ಆಚರಿಸಿದ್ದೇವೆ. ಆದರೆ ಯೋಗಕ್ಕಿಂತ ಧ್ಯಾನ ಹೇಗೆ ಪರಿಣಾಮಕಾರಿ ಎಂಬುವುದು ಹಲವರ ಪ್ರಶ್ನೆ. ಅದೇನೆ ಇರಲಿ ಧ್ಯಾನದ ಪ್ರಭಾವ ಎಷ್ಟೆಂಬುದನ್ನ ಅರಿಯ ಬೇಕಾದರೆ ಬೌದ್ಧ ಬಿಕ್ಕುಗಳ ಸಾಧನೆಯನ್ನು ಅರಿಯ ಬೇಕು. ಥೈಲ್ಯಾಂಡ್‍ನಲ್ಲಿ ಬೌದ್ಧ ಗುರುಗಳು ಕುದಿಯುತ್ತಿರುವ ಎಣ್ಣೆ ಮೇಲೆ ಕುಳಿತು ಧ್ಯಾನಮಾಡುವ ಧ್ಯಾನದ ಪ್ರಭಾವವನ್ನು ತೋರಿದ್ದಾರೆ.
. ಥೈಲ್ಯಾಂಡ್‍ನ ಲುಯಾಂಗ್ ನಮ್‍ಥಾ ಎಂಬ ಪ್ರದೇಶದಲ್ಲಿ ಬೌದ್ಧ ಗುರುಗಳು ಎಣ್ಣೆ ತುಂಬಿದ ಬಾಣಲೆಯ ಮೇಲೆ ಕುಳಿತುಕೊಂಡು ಧ್ಯಾನ ಮಾಡಿದ್ದಾರೆ. ಇದು ಭಯಾನಕ ಸಾಹಸವಾಗಿದ್ದು, ಹಿಂದಿನಿಂದಲೂ ಬೌದ್ಧ ಬಿಕ್ಕುಗಳು ಈ ಸಾಧನೆಯನ್ನು ಮಾಡುತ್ತಿದ್ದಾರೆ.
ಹಲವು ಗಂಟೆಗಳ ಕಾಲ ಕುದಿಯುತ್ತಿರುವ ಎಣ್ಣೆ ಮೇಲೆ ಕುಳಿತು ಧ್ಯಾನ ಮಾಡಿದರೂ ಇವರಿಗೆ ಏನೂ ಆಗದು ಯಾಕೆಂದರೆ ಇದು ಇಂದು ನಿನ್ನೆಯ ಸಾಧನೆ ಅಲ್ಲ ಈ ವಿದ್ಯೆಯನ್ನು ಅರಿಯಲು ಅಂತಹ ಕಠಿಣ ಪರಿಶ್ರಮವಿದೆ.
ಬೌದ್ಧ ಧರ್ಮಿಯರು ನೀಡಿದ ಕುಂಗ್‌ಫೂ, ಜೋಡೋ ಟೆಕ್ನಿಕ್‌ಗಳಂತಹ ಆತ್ಮರಕ್ಷಣೆಯ ಕಲೆಯು ಜಗತ್ತಿನಲ್ಲೇ ಹೆಸರು ಪಡೆದಿವೆ.

ಗುರುವಾರ, ಏಪ್ರಿಲ್ 30, 2015

ತುಳುನಾಡಿನ ಅವಳಿ ವೀರರು 

ಕಾನದ ಕಟದರು

ಪಾಜೆಗುಡ್ಡೆಯಲ್ಲಿ ಕಾನದಕಟದರು ತೆಗೆದ ಹಳ್ಳಕ್ಕೆ ಆವರಣಕಟ್ಟಿ ಪೂಜಿಸುತ್ತಿರುವುದು.

 

ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತಿ ವ್ಯವಸ್ಥೆಯ ಭೀಕರತೆ ಈ ನೆಲದ ಮೂಲನಿವಾಸಿಗಳನ್ನು ಜಗತ್ತಿನ ಯಾವ ವ್ಯವಸ್ಥೆಗಿಂತಲೂ ಅತ್ಯಂತ ಹೀನಾಯವಾಗಿ ನಡೆಸಿ ಕೊಂಡು ಬಂದಿದೆ. ಇಲ್ಲಿನ ಮೂಲ ನಿವಾಸಿಗಳ ನೈಜ ಇತಿಹಾಸವನ್ನು ದಾಖಲಿಸುವಲ್ಲಿಯೂ ಜಾತಿವಾದಿಗಳು ತಾರತಮ್ಯ ಎಸಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಮೂಲ ನಿವಾಸಿಗಳ ನೈಜ ಇತಿಹಾಸ ಅವರ ಜನಪದ ಕತೆಗಳ ರೂಪದಲ್ಲಿ ಹಾಗೇ ಅಚ್ಚಳಿಯದೆ ಉಳಿ ದಿದೆ. ಬಾಯಿಂದ ಬಾಯಿಗೆ ಹರಿದು ಬಂದ ಈ ಕಥಾನಕಗಳು ಹಲವು ಸಂದರ್ಭಗಳಲ್ಲಿ ವ್ಯತ್ಯಾಸವನ್ನು ಹೊಂದಿರಬಹುದಾದ ಸಾಧ್ಯತೆಯಿದ್ದರೂ, ಮೂಲಕಥೆೆಗೆ ಧಕ್ಕೆಯನ್ನಂತೂ ಮಾಡಿರಲಾರವು. ಈ ನಿಟ್ಟಿನಲ್ಲಿ ತುಳುನಾಡಿನಲ್ಲಿ ಮನುವಾದಿ ಸಾಮಾಜಿಕ ವ್ಯವಸ್ಥೆಯ ವಿರುದ್ಧ ನೂರಾರು ವರ್ಷಗಳ ಹಿಂದೆಯೇ ಬಂಡಾಯವೆದ್ದು ಹೋರಾಡಿ ಅಮರರಾಗಿರುವ ಇಬ್ಬರು ವೀರ ಅವಳಿ ಸಹೋದರರ ಕುರಿತು ಇಲ್ಲಿ ನಾನು ಪ್ರಸ್ತಾಪಿಸುತ್ತಿದ್ದೇನೆ. ತುಳುನಾಡಿನಲ್ಲಿ ಅವಳಿ ಸಹೋದರರೆಂದ ತಕ್ಷಣ ನಮಗೆ ಬಿಲ್ಲವ ಸಮುದಾಯದ ವೀರ ಪುರುಷರಾದ ಕೋಟಿ-ಚೆನ್ನಯರ ಬಗ್ಗೆ ನೆನಪು ಬರುತ್ತದೆ. ಇವರ ಬಗ್ಗೆ ಸಾಕಷ್ಟು ಬರವಣಿಗೆಗಳು, ನಾಟಕ-ಚಲನಚಿತ್ರ, ಧಾರಾವಾಹಿ ಯಂತಹ ಕಲಾ ಪ್ರಕಾರಗಳ ಮೂಲಕ ಪ್ರಚಾರವಾಗಿದೆ. ಆದರೆ ಅವರ ಸಮಾನಾಂತರ ಕಾಲಘಟ್ಟದಲ್ಲಿ ಜೀವಿತವಿದ್ದು, ಅವರಿಗೆ ಸರಿಸಮಾನರಾಗಿ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಅವಳಿ ಸಹೋದರರಾದ ಸತ್ಯಸಾರಮಾನಿ ದೈವಗಳೆಂದು ಜನಮಾನಸದಲ್ಲಿ ಪ್ರತೀತಿಯಲ್ಲಿರುವ ಕಾನದ-ಕಟದರ ಬಗ್ಗೆ ಹೆಚ್ಚಿನ ಪ್ರಚಾರ ಸಿಕ್ಕಿಲ್ಲ. ಸಂಶೋಧಕರ ಅಭಿಪ್ರಾಯದ ಪ್ರಕಾರ, ತುಳುನಾಡಿನ ಅಸ್ಪಶ್ಯತೆಯನ್ನಾಧಾರಿತ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಈ ಅವಳಿ ವೀರರು ಕೋಟಿ-ಚೆನ್ನಯರಿಗಿಂತಲೂ ಹಿರಿಯರಾಗಿದ್ದು, ಅವರ ಕಾಲಘಟ್ಟದಲ್ಲೇ ವಿವಿಧ ಸಾಧನೆಗಳನ್ನು ಮಾಡಿ ಜನಮಾನಸದಲ್ಲಿ ದೈವತ್ವದ ಸ್ಥಾನಮಾನ ಪಡೆದವರು. ಕಾಲಕ್ರಮೇಣ ದೈವಗಳಾಗಿ ತುಳುನಾಡಿನ ಎಲ್ಲಾ ಜನರಿಂದ ಕಾಲ ಕಾಲಕ್ಕೆ ಆರಾಧಿಸಲ್ಪಟ್ಟವರು. ಸತ್ಯಸಾರಮಾನಿ ಎಂದೇ ಜನಪ್ರಿಯತೆಯನ್ನು ಪಡೆದಿರುವ ಅವಳಿ ಸಹೋದರರಾದ ಕಾನದ-ಕಟದ ದೈವಗಳನ್ನು ವಿವಿಧೆಡೆಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ. ಇವರನ್ನು ಕಾನದ-ಕಟದ, ಸತ್ಯಸಾರಮಾನಿ, ಸತ್ಯಪದ್ನಾಜಿ, ಸಾರಮುಪ್ಪನೆರ್, ಕಂಬೆರ್ಲ್‌, ಮುತ್ತಪ್ಪನ್-ಚೆರಿಯಪ್ಪನ್ ಎಂಬುದಾಗಿ ಆರಾಧಿಸಲಾಗುತ್ತದೆ ಎಂದು ಈ ಬಗ್ಗೆ ತಿಳಿದವರು ಮಾಹಿತಿ ನೀಡುತ್ತಾರೆ.
ಕಾನದ-ಕಟದರ ಜನನ ಮತ್ತು ಬಾಲ್ಯ
  ಕಾನದ-ಕಟದರು ತುಳುನಾಡಿನ ಅಸ್ಪಶ್ಯ ಸಮುದಾಯವೊಂದಕ್ಕೆ ಸೇರಿದವರಾಗಿದ್ದು, ನೂರಾರು ವರ್ಷಗಳ ಹಿಂದೆ ಇಲ್ಲಿನ ಜಾತೀಯ ತೆಯ ವಿರುದ್ಧ ಧ್ವನಿ ಎತ್ತಿದವರು. ಸತ್ಯಸಾರಮಾನಿ ದೈವಗಳೆಂದೇ ಖ್ಯಾತಿ ಪಡೆದಿರುವ ಕಾನದ-ಕಟದರು ಮನ್ಸ ಸಮುದಾಯಕ್ಕೆ ಸೇರಿದವರು ಎಂಬುದಾಗಿ ಇಲ್ಲಿನ ಜನಪದ ಕತೆಗಳ ಮೂಲ ಆಕರವಾದ ಪಾಡ್ದನಗಳಲ್ಲಿ ಉಲ್ಲೇಖಿತವಾಗಿದೆ. ಕಾನದ-ಕಟದರ ತಂದೆ ಹಂದ್ರ ಮತ್ತು ತಾಯಿಯ ಹೆಸರು ಬೊಲ್ಲೆ. ಹಂದ್ರ ಮತ್ತು ಬೊಲ್ಲೆಗೆ ಈಗಿನ ಬೆಳ್ತಂಗಡಿಯ ಬಂಗಾಡಿಯಲ್ಲಿ ವಿವಾಹ ನಡೆಯಿತು. ವಿವಾಹದ ಬಳಿಕ ನವ ವಧೂ-ವರ ಜೋಡಿಯನ್ನು ಆಗಿನ ಬಂಗಾಡಿಯ ಅರಸ ವೀರವರ್ಮನ ಅರಮನೆಗೆ ಕರೆದೊಯ್ಯಲಾಯಿತು. ಯುವ ಜೋಡಿಯನ್ನು ನೋಡಿ ಸಂತೋಷಿತನಾದ ಅರಸನು, ಬಂಗಾರದ ಸರವನ್ನು ಉಡುಗೊರೆಯನ್ನು ನೀಡಿ, ಬೊಲ್ಲೆಯನ್ನುದ್ದೇಶಿಸಿ ವಿವಾಹದ ಉಡುಗೊರೆಯಾಗಿ ಬೇರೆ ಏನಾದರೂ ಕೇಳು, ನಿನ್ನ ಇಚ್ಛೆ ಏನಿದ್ದರೂ ಅದನ್ನು ನಾನು ಈಡೇರಿಸುತ್ತೇನೆೆ ಎಂದು ಮಾತನ್ನು ನೀಡುತ್ತಾನೆ. ಆಗ ಮದುಮಗಳು ಬೊಲ್ಲೆ, "ನನಗೆ ತಾವು ನೀಡಿರುವ ಉಡುಗೊರೆಯೇ ಸಾಕು, ಮುಂದೆ ಏನಾದರೂ ನೀಡಬೇಕೆನಿಸಿದಲ್ಲಿ ನನ್ನ ಮಕ್ಕಳು ಬಂದು ಕೇಳಿದಲ್ಲಿ ನೀಡಿ" ಎಂದು ವಿನಯದಿಂದ ವಿನಂತಿಸುತ್ತಾಳೆ. ಇದರಿಂದ ಖುಷಿಗೊಂಡ ಅರಸನು, ಱಱಆಯಿತು ನಿನ್ನ ಮಕ್ಕಳು ಯಾವುದೇ ಸಂದರ್ಭದಲ್ಲಿ ಬಂದು ಏನೇ ಬಂದು ಕೇಳಿದಲ್ಲಿ ನಾನು ಅದನ್ನು ನೀಡುವಲ್ಲಿ ಹಿಂದೇಟುಹಾಕುವುದಿಲ್ಲೞೞಎಂದು ಮಾತು ನೀಡಿ, ನವ ಜೋಡಿಗೆ ಆಶೀರ್ವಾದ ಮಾಡಿ ಕಳುಹಿಸುತ್ತಾನೆ. ಹೀಗೆ ದಿನಗಳೆದಂತೆ ಬಸುರಿಯಾದ ಬೊಲ್ಲೆಗೆ ಅವಳಿ ಮಕ್ಕಳ ಹೆರಿಗೆಯಾಗುತ್ತದೆ. ಅವರಲ್ಲಿ ಕಾನದ ಬಳಿ ಹುಟ್ಟಿದ ಮಗುವಿಗೆ ಕಾನದ ಹಾಗೂ ಕಟ್ಟದ ಬಳಿ ಹುಟ್ಟಿದ ಮಗುವಿಗೆ ಕಟದ ಎಂದೂ ನಾಮಕರಣ ಮಾಡಲಾಗುತ್ತದೆ. ಮೂಲತಃ ಕಿಜನಗುತ್ತಿನ ಅರಸರ ಒಕ್ಕಲಿಗೆ ಸಂಬಂಧಿಸಿದ್ದ ಬೊಲ್ಲೆಯನ್ನು ದೇಯಿ ಬೈದೆದಿಯು ದತ್ತು ಪಡೆದು ಸಾಕುತ್ತಿದ್ದಳು, ಆ ಹಿನ್ನೆಲೆಯಲ್ಲಿ ತಾಯಿಯ ಸ್ಥಾನದಲ್ಲಿ ನಿಂತು ಬೊಲ್ಲೆಯ ಮಕ್ಕಳನ್ನೂ ಆಕೆಯೇ ಪಾಲನೆ ಮಾಡುತ್ತಾಳೆ. ಒಂದು ಹಂತದಲ್ಲಿ ಬೊಲ್ಲೆಯು ತನ್ನ ಸಹೋದರರಾದ ಪಾಂಬ-ಪೂಂಬರ ಮನೆಗೆ ಹೊರಟುನಿಂತಾಗ ಕಾನದ-ಕಟದರನ್ನು ಸಾಕುವ ಸಂಪೂರ್ಣ ಜವಾಬ್ದಾರಿಯನ್ನು ದೇಯಿ ಬೈದೆದಿ ವಹಿಸಿಕೊಳ್ಳುತ್ತಾಳೆ. ಹೀಗೆ ದೇಯಿ ಬೈದೆದಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಕಾನದ-ಕಟದರು ತುಂಟಾಟಿಕೆಯಲ್ಲಿ ಗಮನ ಸೆಳೆಯುತ್ತಾರೆ. ಇತರ ಜಾತಿಯ ಹುಡುಗರೊಂದಿಗೆ ಆಟ ಆಡುವಾಗ ನಡೆದ ಗಲಾಟೆಯೊಂದರಲ್ಲಿ ಕಾನದ-ಕಟದರು ತಮ್ಮ ಬಾಲ್ಯದಲ್ಲೇ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಟ್ಟಹಾಸವನ್ನು ಪ್ರಶ್ನಿಸುತ್ತಾರೆ. ಇದು ಆಗಿನ ಮೇಲ್ಜಾತಿ ಜನರ ಕೆಂಗಣ್ಣಿಗೆ ಕಾರಣವಾಗುತ್ತದೆ.
ಬಂಗಾಡಿ ಅರಸರ ಅರಮನೆಗೆ ತೆರಳಿದ ಕಾನದ-ಕಟದರು
ಬೆಳೆದು ನವತರುಣರಾದ ಕಾನದ-ಕಟದರು, ತಮ್ಮ ತಾಯಿ ಬೊಲ್ಲೆಗೆ ವಿವಾಹದ ಸಂದರ್ಭ ಬಂಗಾಡಿ ಅರಸನು ನೀಡಿದ್ದ ವಾಗ್ದಾನದ ಬಗ್ಗೆ ತಿಳಿದು ಬಂಗಾಡಿಯ ಅರಮನೆಗೆ ತೆರಳುತ್ತಾರೆ. ಅಲ್ಲಿ ತಾವು ಬೊಲ್ಲೆಯ ಮಕ್ಕಳೆಂದು ಪರಿಚಯಿಸಿ, ತಮ್ಮ ತಾಯಿಗೆ ಅರಸನು ನೀಡಿದ್ದ ವಾಗ್ದಾನದ ಬಗ್ಗೆ ನೆನಪಿಸುತ್ತಾರೆ. ಬೊಲ್ಲೆಯ ಮಕ್ಕಳೆಂದು ತಿಳಿದು ಖುಷಿಯಾ ದ ಅರಸನು, ತಮಗೆ ಏನು ಬೇಕಾದರೂ ಕೇಳಿ ಮಕ್ಕಳೇ ಎಂದು ಅಭಯವನ್ನು ನೀಡುತ್ತಾನೆ. ಆಗ ಮೊದಲು ಕಾನದ, ತಮಗೆ ತಮ್ಮ ಅರಮನೆಯ ಮುಂದಿರುವ ಬಾಕಿಮಾರು ಹೊಲದ ಸಂದಿನಲ್ಲಿರುವ ತೆಂಗಿನ ಮರಗಳ ತೋಪಿನ ಕಟ್ಟದಪುಣಿ (ರಾಜಬೀದಿ)ಯನ್ನು ಕೇಳುತ್ತಾನೆ. ಇದು ಒಂದು ಅರ್ಥದಲ್ಲಿ ತಮಗೆ ಅಧಿಕಾರದ ಭೂಮಿಯನ್ನು ನೀಡುವಂತೆ ಕಾನದ-ಕಟದರು ಕೇಳಿದಂತಿತ್ತು. ಇದರಿಂದ ಕಂಗೆಟ್ಟ ಅರಸನು, ಅದನ್ನು ನೀಡಲು ಸಾಧ್ಯವಿಲ್ಲ ಬೇರೆ ಏನಾದರೂ ಕೇಳಿ ಎಂದು ಹೇಳುತ್ತಾನೆ. ಆಗ ಕಟದ ಮಾತನ್ನು ಆರಂಭಿಸಿ, ತಮಗೆ ಪಟ್ಟದ ಕುದುರೆಯನ್ನು ನೀಡುವಂತೆ ವಿನಂತಿಸು ತ್ತಾನೆ. ಇದೂ ಒಂದರ್ಥದಲ್ಲಿ ರಾಜ್ಯಾಧಿಕಾರವನ್ನೇ ಕೇಳಿದಂತಿತ್ತು. ಇದರಿಂದ ಕೋಪಿತನಾದ ಅರಸನು, ಅದೆಲ್ಲಾ ನೀಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾನೆ. ಆಗ ವಿನಯದಿಂದ ಮಾತನಾಡಿದ ಕಾನದ-ಕಟದರು "ನೀವು ಹೇಳಿದ ಹಾಗೇ ಕೇಳುವುದು ನಮ್ಮ ಧರ್ಮ, ಕೊಡುವುದು ಬಿಡುವುದು ನಿಮ್ಮ ಧರ್ಮ, ನಾವು ಕೇಳಿದ್ದನ್ನು ನೀವು ಕೊಡುವುದಕ್ಕೆ ಸಿದ್ಧರಿಲ್ಲವೆಂದ ಮೇಲೆ, ನೀವು ನಮ್ಮ ತಾಯಿಗೆ ನೀಡಿದ ವಾಗ್ದಾನ ಸುಳ್ಳಾಗಬಾರದೆಂಬ ನಿಟ್ಟಿನಲ್ಲಿ ನೀವು ನೀಡಿದ್ದನ್ನು ನಾವು ಸ್ವೀಕರಿಸುತ್ತೇವೆ" ಎಂದು ಹೇಳುತ್ತಾರೆ. ಇದರಿಂದ ಸಂತಸಗೊಂಡ ಅರಸನು, ಕಾನದ-ಕಟದರೇ ನೀವು ಬೇಸರ ಮಾಡಬೇಡಿ, "ನೀವು ಕೇಳಿ ದ್ದನ್ನು ಕೊಡಲು ಸಾಧ್ಯವಿಲ್ಲವಾದುದರಿಂದ ನಿಮಗೆ ನಾನು ಬೆಳ್ಳಿಯ ಎರಡು ಮುಟ್ಟಾಲೆ (ತಲೆಗೆ ಧರಿಸುವ ಟೋಪಿ ಮಾದರಿಯ ಸಾಧನ) ನೀಡುತ್ತೇನೆ" ಎಂದು ಹೇಳುತ್ತಾನೆ. ಅದೇ ಸಂದರ್ಭ ಮಲ್ಲೋಡಿ ಬುದ್ಯಂತೆರ್ ಬೊಲ್ಲೆಗೆ ನೀಡಲುದ್ದೇಶಿಸಿದ್ದ ಎರಡು ಮುಡಿ ಹೊಲವನ್ನು ಕೂಡ ಪಡೆದುಕೊಳ್ಳಿ ಎಂದು ಅರಸನು ಹೇಳುತ್ತಾನೆ. ಹೀಗೆ ಮುಟ್ಟಾಲೆ ಮತ್ತು ಹೊಲವನ್ನು ಪಡೆದು, ಬಂಗಾಡಿಯಿಂದ ಬಂದು ತಮಗೆ ನೀಡಿದ ಹೊಲಕ್ಕೆ ಬೇಲಿ ಹಾಕಿ, ಕೆರೆ ನಿರ್ಮಿಸುತ್ತಾರೆ. ಅದೇ ಪ್ರಕಾರ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ನಡೆಯುತ್ತಿದ್ದ ಕೋಣದ ಜಾತ್ರೆಗೆ ತೆರಳಿ ಅಲ್ಲಿಂದ ಕಾರಿ-ಕಬಿಲ ಜೋಡಿ ಕೋಣವನ್ನು ಖರೀದಿಸುತ್ತಾರೆ. ಆ ಕಾಲಘಟ್ಟದಲ್ಲಿ ಕಾರಿ-ಕಬಿಲ ಕೋಣಗಳನ್ನು ಜೋಡಿ ಮಾಡುವ ಸಂಪ್ರದಾಯವಿರಲಿಲ್ಲ. ಆದರೆ ಸಂಪ್ರದಾಯವನ್ನು ಮುರಿದ ಕಾನದ-ಕಟದರನ್ನು ಜಾತಿಯ ಕಾರಣಕ್ಕಾಗಿ ಮೇಲ್ಜಾತಿ ಜನರು ಹೀಯಾಳಿಸುವುದಕ್ಕೆ ಮುಂದಾದಾಗ, ಅಲ್ಲಿ ಕೋಣಗಳ ವ್ಯಾಪಾರ ಮಾಡಿ ಭಾರೀ ಲಾಭ ಗಳಿಸುತ್ತಿದ್ದ ಘಟ್ಟದ ಮೇಲಿನ ಗೌಡರ ಜೊತೆ ಸಂಘರ್ಷಕ್ಕಿಳಿಯುತ್ತಾರೆ. ಮುಂದೆ ಕುಲ್ಕುಂದ ಜಾತ್ರೆ ಕೇವಲ 15 ದಿನಗಳು ಮಾತ್ರ ನಡೆಯಲಿ ಎಂದು ಈ ಸಂದರ್ಭ ಕಾನದ ನುಡಿಯುತ್ತಾನೆ. ಆ ಪ್ರಕಾರವೇ ಮುಂದೆ ಕುಲ್ಕುಂದ ಜಾತ್ರೆ 15 ದಿನಗಳಿಗೆ ಸೀಮಿತವಾಗುತ್ತದೆ. 

ಅತ್ಯರ ತಳಿಯನ್ನು ಮೊದಲಬಾರಿ ತುಳುನಾಡಿನಲ್ಲಿ ಬೆಳೆದದ್ದು 
ಕೋಣಗಳನ್ನು ಹೊಂದಿಸಿಕೊಂಡ ಬಳಿಕ ಕಾನದ-ಕಟದರು ಅವುಗಳನ್ನು ದಡ್ಡಾಲ್ ಪಲ್ಕೆ ಎಂಬಲ್ಲಿ ಕಟ್ಟಿ ಹಾಕಿ, ಬೆಳೆ ಬೆಳೆಯುವುದಕ್ಕೆ ಉತ್ತಮ ಬೀಜದ ತಳಿಯನ್ನು ಸಂಗ್ರಹಿಸುವುದಕ್ಕೆ ಸಿದ್ಧರಾಗುತ್ತಾರೆ. ಆ ಪ್ರಕಾರ ಬಿಸಿಲೆ ಘಾಟಿ ದಾಟಿ ಇಕ್ಕೇರಿ ಸೀಮೆಯ ಶಿವಪ್ಪನಾಯ್ಕನಲ್ಲಿಗೆ ತೆರಳಿ ಸತ್ಯದ ಬೆಳೆ ಎಂದೇ ಜನಪ್ರಿಯವಾಗಿದ್ದ ಅತ್ಯರ ತಳಿಯ ಬೀಜವನ್ನು ಪಡೆದುಕೊಳ್ಳುತ್ತಾರೆ. ಅಲ್ಲಿವರೆಗೆ ತುಳುನಾಡಿನಲ್ಲಿ ಆ ತಳಿಯ ಭತ್ತವನ್ನು ಯಾರೂ ಬೆಳೆದಿರುವುದಿಲ್ಲ. ಅದನ್ನು ಇಲ್ಲಿ ಬೆಳೆಯುವುದು ಅಸಾಧ್ಯ ವೆಂದೇ ನಂಬಲಾಗಿತ್ತು. ಆ ಬೆಳೆಯ ತಳಿಯನ್ನು ಘಟ್ಟದ ಮೇಲಿಂದ ಯಾರೂ ಕೊಂಡೊಯ್ಯದಂತೆ ಕಾಪಾಡುತ್ತಿದ್ದ ಆ ಬೆಳೆಯ ರಕ್ಷಕಿ, ತಾಯಿಯೆಂದೇ ಹೆಸರು ಪಡೆದಿದ್ದ ಚವುಂಡಿ ಗಡಿ ಭಾಗದಲ್ಲಿ ಕಾನದ-ಕಟದರನ್ನು ತಡೆದು ನಿಲ್ಲಿಸುತ್ತಾಳೆ. ಈ ಸಂದರ್ಭ ಚವುಂಡಿ ಮತ್ತು ಕಾನದ-ಕಟದರ ನಡುವೆ ಸಂಘರ್ಷ ನಡೆದು, ಕಾನದ-ಕಟದ ರೂ ವೀರ ಪುರುಷರೆಂಬುದನ್ನು ಅರಿತ ಆಕೆ ಅವರ ಸಾಹಸಕ್ಕೆ ಮೆಚ್ಚಿ ಸತ್ಯದ ಬೆಳೆ ಅತ್ಯರ ತಳಿಯನ್ನು ಕೊಂಡೊಯ್ಯಲು ಅನುಮತಿ ನೀಡಿದು ದಲ್ಲದೆ, ಅವಳಿ ಪುರುಷರಿಗೆ ಎರಡು ಖಡ್ಗಗಳನ್ನು ಉಡುಗೊರೆಯಾಗಿ ನೀಡುತ್ತಾಳೆ. ಹೀಗೆ ಬಂದ ಕಾನದ-ಕಟದರು, ದಡ್ಡಾಲ್ ಪಲ್ಕೆಗೆ ಬಂದು ತಾವು ಕಟ್ಟಿ ಹೋಗಿದ್ದ ಕೋಣಗಳನ್ನು ಜೊತೆ ಸೇರಿಸಿಕೊಂಡು, ತಮ್ಮ ಹೊಲ ಇರುವಲ್ಲಿಗೆ ಬಂದು ಕೃಷಿಕಾರ್ಯ ಆರಂಭಿಸುತ್ತಾರೆ. ಆ ಮೂಲಕ ತುಳುನಾಡಿನಲ್ಲಿ ಸತ್ಯದ ಬೆಳೆ ಎಂದೇ ಇಂದಿಗೂ ಖ್ಯಾತಿ ಪಡೆದಿರುವ ಅತ್ಯರ ತಳಿಯ ಬೆಳೆಯನ್ನು ಮೊದಲು ಆರಂಭಿಸಿದ ಕೀರ್ತಿ ಕಾನದ-ಕಟದರಿಗೆ ಸಲ್ಲುತ್ತದೆ.
 ಕೇಲದ ಪೆರ್ನು- ಎನ್ಮೂರ ದೆಯ್ಯು ಹಾಗೂ ಕೋಟಿ-ಚೆನ್ನಯರ ಭೇಟಿ
ಹೀಗೆ ದಿನಕಳೆಯುತ್ತಿದ್ದಂತೆಯೇ ಅವರಿಗೆ ಮುಗೇರ ಸಮುದಾಯದ ಕೇಲದ ಪೆರ್ನು ಮತ್ತು ಎನ್ಮೂರ ದೆಯ್ಯು ಎಂಬ ಇಬ್ಬರು ಭಾವ- ಭಾಮೈದುನರ ಸಂಪರ್ಕವಾಗುತ್ತದೆ. ಅವರೊಂದಿಗಿನ ಪರಿಚಯವು ಸಂಘರ್ಷದೊಂದಿಗೆ ಆರಂಭವಾದರೂ, ತಾವೂ ಕೆಳ ವರ್ಗಕ್ಕೆ ಸೇರಿದವರಾದುದರಿಂದ ಇಲ್ಲಿನ ಜಾತಿ ವ್ಯವಸ್ಥೆಯ ಸಮಾನ ಸಂತ್ರಸ್ತರು ಎಂಬುದನ್ನು ಅರಿತು ಮುಂದಕ್ಕೆ ತಾವು ಜೊತೆಯಾಗಿ ಸಾಗುವ ನಿರ್ಣಯಕ್ಕೆ ಬರುತ್ತಾರೆ. ಅದೇ ಕಾಲಘಟ್ಟದಲ್ಲಿ ಜೀವಿತವಿದ್ದ ಬಿಲ್ಲವ ಸಮುದಾಯದ ಅವಳಿ ವೀರಪುರುಷರಾದ ಕೋಟಿ-ಚೆನ್ನಯರಿಗೂ ಕಾನದ-ಕಟದರಿಗೂ ಇದೇ ರೀತಿಯ ಒಂದು ಸಂಘರ್ಷಮಯ ವಾತಾ ವರಣದಲ್ಲಿ ಪರಿಚಯವಾಗುತ್ತದೆ. ಬಾಲ್ಯದಲ್ಲಿ ತಮ್ಮನ್ನು ಪಾಲನೆ ಮಾಡಿದ್ದ ದೇಯಿ ಬೈದೆದಿಯ ಮಕ್ಕಳೇ ಕೋಟಿ-ಚೆನ್ನಯರೆಂದು ಅರಿತ ಮೇಲೆ ಕಾನದ-ಕಟದರು ಸೋದರತ್ವ ಭಾವನೆಯಿಂದ ತಾವು ಮುಂದು ವರಿಯಬೇಕೆಂದು ವಯಸ್ಸಿನಲ್ಲಿ ಕಿರಿಯವರಾದ ಕೋಟಿ- ಚೆನ್ನಯರಿಗೆ ಬುದ್ಧಿವಾದ ಹೇಳಿ, ಅಂದು ಚಾಲ್ತಿಯಲ್ಲಿದ್ದ ಅಸ್ಪೃಶ್ಯತೆಯ ವಿರುದ್ಧ ತಾವು ಜೊತೆಯಾಗಿ ಹೋರಾಡಬೇಕೆಂದು ಒಮ್ಮತಕ್ಕೆ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದ ಕಾನದ-ಕಟದರು, ಕೇಲದ ಪೆರ್ನು- ಎನ್ಮೂರ ದೆಯ್ಯು, ಕೋಟಿ-ಚೆನ್ನಯರು ಇಲ್ಲಿನ ಅಸ್ಪಶ್ಯತೆಯನ್ನಾಧರಿಸಿದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಸಾಕಷ್ಟು ಹೋರಾಟ ನಡೆಸುತ್ತಾರೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಇಲ್ಲಿ ಕತೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಹೀಗಾಗಿ ಈ ಬಗ್ಗೆ ಆಸಕ್ತಿಯಿ ರುವವರು ಈ ಸಂಬಂಧ ಹೆಚ್ಚಿನ ಅಧ್ಯಯನ ನಡೆಸಬಹುದು ಅಥವಾ ಈಗಾಗಲೇ ಪ್ರಕಟಗೊಂಡಿರುವ ಕೆಲವು ಪುಸ್ತಕಗಳನ್ನು ಓದಬಹುದು.
ಪಾಜೆಗುಡ್ಡೆಯಲ್ಲಿ ಕಾನದ ಕಟದರ ಸಾಹಸ
ಪಾಜೆಗುಡ್ಡೆಯಲ್ಲಿ ಕಾನದ ಕಟದರು ತೆಗೆದ ಹಳ್ಳ

ಕಾನದ-ಕಟದರ ಜೀವನದಲ್ಲಿ ಬರುವ ಸನ್ನಿವೇಶದಲ್ಲಿ ನಮಗೆ ಅತ್ಯಂತ ಪ್ರಮುಖವೆನಿಸುವುದು ಈಗಿನ ಕಾರ್ಕಳ ತಾಲೂಕಿನ ಪಾಜೆಗುಡ್ಡ ಎಂಬಲ್ಲಿ ನಡೆದ ಒಂದು ಪವಾಡ ಸದೃಶ ಸನ್ನಿವೇಶ. ಈ ಸನ್ನಿವೇಶದಲ್ಲಿ ಕಾನದ-ಕಟದರು, ಕೋಟಿ-ಚೆನ್ನಯರು, ಕೇಲದ ಪೆರ್ನು-ಎನ್ಮೂರ ದೆಯ್ಯು ಒಂದೇ ಸ್ಥಳದಲ್ಲಿ ಬೇಟೆಯ ಉದ್ದೇಶಕ್ಕಾಗಿ ಸೇರುತ್ತಾರೆ. ಆಗಿನ ಕಾಲ ಘಟ್ಟದಲ್ಲೇ ತಳ ಸಮುದಾಯಗಳ ನಡುವಿನ ಜಾತಿ ಐಕ್ಯತೆಗೆ ಸಂಬಂಧಿಸಿದ ಒಂದು ಮಾದರಿ ಸನ್ನಿವೇಶ ಇದಾಗಿದೆ. ಈ ಸನ್ನಿವೇಶ ದಲ್ಲಿ ಬರುವ ಸಾಮಾಜಿಕ ಸಂದೇಶ ಇಂದಿನ ಜಾತಿ ಸಂಘಟನೆಗಳಿಗೆ ಆದರ್ಶವೆನಿಸಬೇಕು. ಅಂದಿನ ಕಾಲಘಟ್ಟಕ್ಕೆ ಮೂರು ಭಿನ್ನ ಅಸ್ಪಶ್ಯ ಸಮುದಾಯಗಳ ಮುಖವಾಣಿಯಂತಿರುವ ಈ ಮೂರು ಆದರ್ಶ ಜೋಡಿ ಪುರುಷರನ್ನು ಇಂದು ನಾವು ದೈವ ಸ್ವರೂಪದಲ್ಲಿ ಆರಾಧಿಸುತ್ತಿದ್ದೇವೆ. ಆದರೆ ಅವರ ಆರಾಧನೆ ಕೇವಲ ಆರಾಧನೆಗೆ ಸೀಮಿತವಾಗದೆ, ಇಂದಿನ ದಿನಕ್ಕೆ ಜಾತಿ-ಜಾತಿಗಳ ನಡುವಿನ ಸಾಮಾಜಿಕ ಅನುಸಂಧಾನಕ್ಕೆ ನಾಂದಿಯಾಗಬೇಕಾಗಿತ್ತು. ಇಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಜಾತಿ ತಾರತಮ್ಯದ ವಿರುದ್ಧ ಸಂಘಟಿ ತರಾಗಲು ಈ ಸಮುದಾಯಗಳಿಗೆ ಪ್ರೇರಕ ಶಕ್ತಿಯಾಗಬೇಕಾಗಿತ್ತು. ಇಂತಹ ಪ್ರೇರಣೆಯ ಮೂಲಕ ಒಂದೇ ವೇದಿಕೆಯಡಿ ಮೂರೂ ಸಮುದಾಯಗಳು ಸಂಘಟಿತವಾದಲ್ಲಿ ತುಳುನಾಡಿನಲ್ಲಿ, ಜಾತಿವಾದಿ ಗಳ ಅಟ್ಟಹಾಸಕ್ಕೆ ಯಾವುದೇ ನೆಲೆಯಿರುವುದಿಲ್ಲ. ಕಾನದ-ಕಟದರ ಇತಿಹಾಸದಲ್ಲಿ ಪಾಜೆಗುಡ್ಡದ ಸನ್ನಿವೇಶವೇ ಅತ್ಯಂತ ಪ್ರಮುಖವೆನಿಸು ವುದು. ತುಳುನಾಡಿನ ಸಂಪ್ರದಾಯಗಳನುಸಾರ ಕೆಡ್ಡಸದ ದಿನ ಕಾಡುಮೃಗಗಳ ಬೇಟೆಯಾಡುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆಯಿತ್ತು. ಆ ಸಂದರ್ಭ ತಮ್ಮ ಕೃಷಿಗೆ ಹಾನಿ ಮಾಡುವ ಕಾಡುಮೃಗಗಳನ್ನು ಬೆದರಿಸುವ ಕ್ರಮವಾಗಿ ಈ ರೀತಿ ಬೇಟೆಯಾಡಲಾಗುತಿತ್ತು. ಹಾಗೇ ಒಂದು ಕೆಡ್ಡಸದ ದಿನ ಬೇಟೆ ಯಾಡಲು ನಿರ್ಧರಿಸಿದ ಕಾನದ-ಕಟದರು, ಕೋಟಿ-ಚೆನ್ನಯರು, ಕೇಲದ ಪೆರ್ನು-ಎನ್ಮೂರ ದೆಯ್ಯುರ ನೇತೃತ್ವದ ತಂಡಗಳು ಬೇಟೆಯಾಡಲು ನಿರ್ಧರಿಸಿದವು. ಆ ಪ್ರಕಾರ ದಡ್ಡಾಲ್ ಪಲ್ಕೆ, ಮಾದೇರಿಕಾಡು, ಬಂಟಮಲೆ ದಾಟಿ ಈಗಿನ ಪಾಜೆಗುಡ್ಡ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದರು. ಬೇಟೆಯ ಸಂದರ್ಭ ಕಾನದ-ಕಟದರ ಪ್ರೀತಿಯ ಬೇಟೆ ನಾಯಿಗಳಾದ ಕಾಲು-ಬೊಲ್ಲು ನಾಯಿಗಳು ಅತ್ಯಂತ ಉತ್ಸುಕತೆಯಿಂದ ಬೇಟೆಯಾಡಿ ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಬೇಟೆಯಾಡುತ್ತಾ ಎಲ್ಲರೂ ಬಾಯಾರಿಕೆ, ಹಸಿವೆಯಿಂದ ಬಳಲುತ್ತಾರೆ. ಹೀಗಾಗಿ ನೀರಿಗಾಗಿ ಹುಡುಕಾಡುತ್ತಾರೆ. ಆದರೆ ಎಲ್ಲೂ ಅವರಿಗೆ ನೀರಿನ ಹರಿವಿನ ಬಗ್ಗೆ ಗೋಚರವಾಗುವುದಿಲ್ಲ. ಆದರೆ ಭೂಮಿಯಡಿ ನೀರಿನ ಹರಿವಿನ ಬಗ್ಗೆ ತಿಳಿಯುವುದರಲ್ಲಿ ನಿಪುಣರಾಗಿದ್ದ ಕಾನದ-ಕಟದರು ಪಾಜೆಗುಡ್ಡೆಯ ಒಂದು ಮುರಕಲ್ಲಿನಡಿ ನೀರಿನ ಒಳಹರಿವಿರುವುದನ್ನು ಗುರುತಿಸುತ್ತಾರೆ. ಅದರಂತೆ ನೀರನ್ನು ತೆಗೆಯುವುದಕ್ಕಾಗಿ ಮೊದಲು ಕೋಟಿ ಚೆನ್ನಯರು ಪ್ರಯತ್ನಿಸುತ್ತಾರೆ. ಅವರು ತಮ್ಮ ಖಡ್ಗದಿಂದ ಕಲ್ಲನ್ನು ತಿವಿದು ನೀರು ತೆಗೆಯಲು ಯತ್ನಿಸುತ್ತಾರೆ. ಆದರೆ ಅವರ ಖಡ್ಗದ ಮೊನೆ ಬಗ್ಗಿ ಹೋದುದರಿಂದ ನೀರು ತೆಗೆಯುವಲ್ಲಿ ಅವರು ವಿಫಲರಾಗುತ್ತಾರೆ. ಆ ಬಳಿಕ ಕೇಲದ ಪೆರ್ನು ಮತ್ತು ಎನ್ಮೂರ ದೆಯ್ಯು ತಮ್ಮ ಆಯುಧವಾದ ಬಿಲ್ಲು-ಬಾಣ ದಿಂದ ಕಲ್ಲನ್ನು ತಿವಿದು ನೀರನ್ನು ಹೊರತೆಗೆಯಲು ಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನವೂ ವಿಫಲವಾಗಿ, ಅವರ ಬಾಣದ ಮೊನೆ ತುಂಡಾಗುತ್ತದೆ. ಕೊನೆಗೆ ವೀರ ಪುರುಷರಾದ ಕಾನದ-ಕಟದರು ತಮ್ಮ ಬಳಿಯಿದ್ದ ಗೊಲುಂಬುರು ಎಂಬ ಮರದ ದೊಣ್ಣೆಯಿಂದ ಮುರ ಕಲ್ಲನ್ನು ತಿವಿಯುತ್ತಾರೆ. ಆಗ ಪಕ್ಕನೆ ನೀರು ಚಿಮ್ಮಿ ಎಲ್ಲರಿಗೂ ಅಚ್ಚರಿ ಮೂಡುತ್ತದೆ. ಬೇಟೆಯ ದಾಹದಿಂದ ಬಳಲಿದ್ದವರಿಗೆ ನೀರಿನ ಒರತೆ ಕಂಡು ಸಂತಸವಾಗುತ್ತದೆ. ಆಗ ನೀರನ್ನು ಯಾರು ಮೊದಲು ಕುಡಿಯಬೇಕೆಂಬ ವಿಷಯದಲ್ಲಿ ಕೊಂಚಗೊಂದಲವುಂಟಾಯಿತು. ತಮ್ಮನ್ನು ಸಾಕಿದ ತಾಯಿಯ ಮಕ್ಕಳು ಎಂಬ ಕಾರಣಕ್ಕೆ ಕಾನದ-ಕಟದರುಮೊದಲು ನೀರು ಕುಡಿಯುವ ಅವಕಾಶವನ್ನು ಕೋಟಿ-ಚೆನ್ನಯರಿಗೆ ನೀಡುತ್ತಾರೆ. ಆಗ ಅದರಿಂದ ಬೇಸರಗೊಂಡ ಕೇಳದ ಪೆರ್ನು ಮತ್ತು ಎನ್ಮೂರ ದೆಯ್ಯು ಹಾಗೂ ಕಾನದ-ಕಟದರ ನಡುವೆ ಸಂಘರ್ಷವೇರ್ಪಡುತ್ತದೆ. ಕೊನೆಗೆ ತಾವು ಎಲ್ಲರೂ ಜಾತಿ ವ್ಯವಸ್ಥೆಯ ಬಲಿಪಶುಗಳಾದ ಕಾರಣ, ನಮ್ಮನಮ್ಮ್ಮೆಳಗೆ ಸಂಘರ್ಷ ಸರಿಯಲ್ಲವೆಂಬ ಕಾನದನ ಮಾತಿಗೆ ಒಮ್ಮತ ಸೂಚಿಸಿದ ಮೂರು ಸಮುದಾಯಗಳ ಪವಾಡ ಪುರುಷರೂ ಸಹಮತದಿಂದ ಇರುವಂತೆ ನಿರ್ಣಯ ಕೈಗೊಂಡರು ಎಂದು ಸಂಶೋಧಕರು ತಿಳಿಸುತ್ತಾರೆ.
                                                                                                              -ಗಣೇಶ್ ಕುಂಜೂರು ಪಂಜ


ಭಾನುವಾರ, ಫೆಬ್ರವರಿ 8, 2015

200 ವರ್ಷಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಬಿಕ್ಕು ಇನ್ನೂ ಸಜೀವ

ಬರೊಬ್ಬರಿ 2 ಶತಮಾನಗಳ ಹಿಂದೆ ಸಮಾಧಿಯಾಗಿದ್ದ ಬೌದ್ಧ ಸನ್ಯಾಸಿಯೊಬ್ಬರು ಈಗಲೂ ಜೀವಂತವಾಗಿದ್ದಾರೆ ಎಂದರೆ ನಂಬಲು ಸಾಧ್ಯವೇ? ಆದರೆ ಮಂಗೋಲಿಯಾದಲ್ಲಿ 200 ವರ್ಷಗಳ ಹಿಂದಿನ ಸಮಾಧಿಯೊಂದು ಪತ್ತೆಯಾಗಿದ್ದು ಅದರಲ್ಲಿ ಬೌದ್ಧ ಬಿಕ್ಕುವೊಬ್ಬರು ಜೀವಂತ ಪತ್ತೆಯಾಗಿದ್ದಾರೆ. ಅವರಿನ್ನು ಧ್ಯಾನಸ್ಥ ಸ್ಥಿತಿಯಲ್ಲಿರುವುದು ಅಚ್ಚರಿಯನ್ನು ಸೃಷ್ಟಿಸಿದೆ.

 ಗುಹೆಯೊಂದರಲ್ಲಿ ಈ ಬಿಕ್ಕುವನ್ನು ಪತ್ತೆಹಚ್ಚಿದ ಸ್ಥಳೀಯ ವ್ಯಕ್ತಿಯೊಬ್ಬನು ಅವರನ್ನು ತನ್ನ ಮನೆಗೆತ್ತಿಕೊಂಡು ಬಂದು ಹಲವು ದಿನಗಳ ಕಾಲ ಇಟ್ಟುಕೊಂಡಿದ್ದಾನೆ. ನಂತರ ಕಾಳಸಂತೆಯಲ್ಲಿ ಮಾರಾಟ ಮಾಡಲು ಹೊರಟಾಗ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ.
 ಸದ್ಯ ಭಿಕ್ಷುವನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇಡಲಾಗಿದೆ. ಇದು ಆಳವಾದ ಧ್ಯಾನಸ್ಥ ಸ್ಥಿತಿ. ಮೂರು ದಿನಗಳ ಕಾಲ ನಿರಂತರವಾಗಿ ಧ್ಯಾನಸ್ಥ ಸ್ಥಿತಿಯಲ್ಲಿದ್ದರೆ  ಈ ಸ್ಥಿತಿಗೆ ತಲುಪುತ್ತಾರೆ. ಕೆಲ ದಿನಗಳು ಕಳೆದಂತೆ ದೇಹ ನಿಧಾನವಾಗಿ ಸಂಕುಚಿತಗೊಳ್ಳುತ್ತ ಸಾಗುತ್ತದೆ ಎಂದು ಬೌದ್ಧ ಸನ್ಯಾಸಿ ಡಾಕ್ಟರ್. ಬ್ಯಾರಿ ಕೆರ್ಜಿನ್ ತಿಳಿಸಿದ್ದಾರೆ.
ಕೃಪೆ: ವೆಬ್‌ದುನಿಯಾ